ಅನಾರ್ಥೊಸೈಟ್
	ಅಗ್ನಿಶಿಲೆಗಳ ಸಮುದಾಯದಲ್ಲೇ ಬಹಳ ವೈಶಿಷ್ಟ್ಯವುಳ್ಳದ್ದೂ ಸ್ವಾರಸ್ಯಕರವಾದದ್ದೂ ಆಗಿರುವ ಗ್ಯಾಬ್ರೋ ಅಗ್ನಿಶಿಲೆಯ ಗುಂಪಿಗೆ ಸೇರಿದ ಒಂದು ವಿಶೇಷ ಪ್ರಭೇದ. ಇದು ಅಂತರಗ್ನಿಶಿಲೆಗಳ (ಪ್ಲುಟಾನಿಕ್ ರಾಕ್ಸ್) ಗುಂಪಿಗೆ ಸೇರಿದೆ. ಸಾಮಾನ್ಯವಾಗಿ ದಪ್ಪ ಕಣಗಳಿಂದ ಕೂಡಿದ ಸಮಕಣ (ಗ್ರಾನಿಟಿಕ್) ಒಳರಚನೆಯನ್ನು ಹೊಂದಿರುತ್ತದೆ.

	ಈ ಶಿಲೆಯ ಉತ್ಪತ್ತಿಯ ಬಗ್ಗೆ ಅನೇಕ ಸಮಸ್ಯೆಗಳೆದ್ದಿವೆ. ಇದರ ಖನಿಜ ಸಂಯೋಜನೆಯಲ್ಲಿ ಬಹುಭಾಗ ಲ್ಯಾಬ್ರಡೊರೈಟ್ ಫೆಲ್ಡ್‍ಸ್ಪಾರ್‍ನಿಂದ ಕೂಡಿರುತ್ತದೆ. ಈ ಕಾರಣದಿಂದಾಗಿ ಇದನ್ನು ಫೆಲ್‍ಸಿಕ್ ಶಿಲೆಯೆಂದು ಪರಿಗಣಿಸಲಾಗಿದೆ.

	ಪ್ರೀ-ಕೇಂಬ್ರಿಯನ್ ಯುಗದ ಶಿಲಾಪ್ರಾಂತಗಳಲ್ಲಿ ಈ ಶಿಲೆಯ ಒಡ್ಡುಗಳನ್ನು (ಡೈಕು) ಗುರುತಿಸಿದ್ದಾರೆ. ಮಿನಿಸೊಟಾ, ಕ್ವಿಬೆಕ್, ಅಮೆರಿಕದ ಅಡಿರೋಂಡಾಕ್, ಲ್ಯಾಬ್ರಡಾರ್ ಮತ್ತು ನಾರ್ವೇ ದೇಶಗಳಲ್ಲಿ ಈ ಶಿಲೆ ಅಂತಸ್ಸರಣವರ್ಗದ ಲ್ಯಾಕೊಲಿತ್‍ಗಳಾಗಿ ಉದ್ಭವಿಸಿದೆ.

	ಇವಲ್ಲದೆ, ದಕ್ಷಿಣ ಆಫ್ರಿಕದ ಬುಷ್‍ವೆಲ್ಡ್, ಅಮೆರಿಕದ ಮೊಂಟಾನ, ಸ್ಪಿಲ್‍ವಾಟರ್ ಕಾಂಪ್ಲೆಕ್ಸ್ ಮತ್ತು ತಮಿಳುನಾಡಿನ ಸೀತಂಪುಂಡಿ ಪ್ರದೇಶಗಳಲ್ಲಿ ಅನಾರ್ಥೊಸೈಟ್, ಪ್ರಸ್ತರೀಕೃತ ಲೋಪೋಲಿತ್ ಆಕಾರದಲ್ಲಿ ಕಂಡುಬಂದಿದೆ, ನಮ್ಮ ದೇಶದ ಬಿಹಾರ್, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹಲವೆಡೆ ಈ ಶಿಲೆಗಳಿವೆ. ಸಾಮಾನ್ಯವಾಗಿ ಅಗ್ನಿಶಿಲೆಗಳು ಶಿಲಾರಸದಿಂದಲೋ (ಲಾವಾ) ಅಥವಾ ಶಿಲಾಪಾಕಗಳಿಂದಲೋ (ಮ್ಯಾಗ್ಮ) ಜನ್ಮತಾಳಿದುವು. ಆದರೆ ಈ ಶಿಲೆಗಳು ಘನರೂಪದಲ್ಲೇ ಉತ್ಪನ್ನವಾಗಿರಬಹುದೆಂಬ ನಂಬಿಕೆಗೆ ಪೋಷಕವಾಗಿರುವ ಅನೇಕ ನಿದರ್ಶನಗಳು ಪ್ರಕೃತಿಯಲ್ಲಿ ದೊರೆಕಿವೆ. ಈ ಕಾರಣಗಳಿಂದ ಇದನ್ನು ವಿಶೇಷರೀತಿಯ ಅಗ್ನಿಶಿಲೆಯೆಂದು ಪರಿಗಣಿಸಬಹುದು.

	ಇದರ ಖನಿಜ ಸಂಯೋಜನೆಯಲ್ಲಿ ಸಾಮಾನ್ಯವಾಗಿ 90% ಲ್ಯಾಬ್ರಡರೈಟ್ ಫೆಲ್ಡ್‍ಸ್ಪಾರ್ ಇದ್ದು, ಇನ್ನುಳಿದ 10%ರಲ್ಲಿ ಮೆಗ್ನೀಸಿಯಂ ಮತ್ತು ಕಬ್ಬಿಣಾಂಶ ಹಾರನ್‍ಬ್ಲೆಂಡ್ ಮತ್ತು ಬಯೊಟೈಟ್ ಖನಿಜಗಳೂ ವಿರಳವಾಗಿ ಇದರಲ್ಲಿ ಇರುವುದುಂಟು. ಪೈರೋಪ್ ಮತ್ತು ಸ್ಪಿನೆಲ್ ಎಂಬ ಖನಿಜಗಳೂ ಸಂದರ್ಭಾನುಸಾರ ಇದರಲ್ಲಿ ಸಿಗುತ್ತವೆ.

	ಕೆಲವು ಅನಾರ್ಥೊಸೈಟ್ ಶಿಲೆಗಳ ಫೆಲ್ಡ್‍ಸ್ಪಾರ್ ಖನಿಜದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಿದ್ದು ಲ್ಯಾಬ್ರಡರೈಟ್‍ಗೆ ಬದಲಾಗಿ ಅನಾರ್ಥೈಟ್ ಎಂಬ ಫೆಲ್ಡ್‍ಸ್ಪಾರ್‍ನ ಮತ್ತೊಂದು ಬಗೆಯನ್ನು ಕಾಣಬಹುದು. ಇಂಥ ಶಿಲೆಗಳನ್ನು ಅನಾರ್ಥೈಟ್ ಶಿಲೆ ಎಂದೇ ಕರೆಯಲಾಗುತ್ತದೆ. ದಕ್ಷಿಣ ಕ್ಯಾಲಿಫೋರ್ನಿಯದ ಸ್ಯಾನ್‍ಮಾರ್ಕೋಸ್ ಪ್ರದೇಶದಲ್ಲಿ ಈ ತರದ ಶಿಲೆಯನ್ನು ವರ್ಣಿಸಲಾಗಿದೆ. ಇಲ್ಲಿ ಸಿಕ್ಕುವ ಶಿಲೆಯಲ್ಲಿ 85% ಅನಾರ್ಥೈಟ್ ಫೆಲ್ಡ್‍ಸ್ಪಾರ್ ಇದ್ದು ಇನ್ನುಳಿದ 5% ಹಾರನ್‍ಬ್ಲೆಂಡ್ ಮತ್ತು ಅಗೈಟ್ ಖನಿಜಗಳಿಂದ ಕೂಡಿದೆ. ಬುಷ್‍ವೆಲ್ಡ್‍ನಲ್ಲಿ ದೊರೆಯುವ ಶಿಲೆಯಲ್ಲಿ ಬಹುಭಾಗ ಬೈಟೊನೈಟ್ ಫೆಲ್ಡ್‍ಸ್ಪಾರ್ ಖನಿಜವಿದ್ದು ಅದರೊಡನೆ ಬ್ರಾನ್eóÉೈಟ್ ಕಂಡುಬಂದಿದೆ.

	ಕೆಲವು ಅನಾರ್ಥೊಸೈಟ್‍ಗಳಲ್ಲಿ ಅಲ್ಯುಮಿನ (ಂಟ2ಔ3) ಹೆಚ್ಚು ಪ್ರಮಾಣದಲ್ಲಿದ್ದು, ಅಗೈಟ್, ಹೈಪರ್‍ಸ್ತೀನ್ ಖನಿಗಳು ರೂಪುಗೊಳ್ಳಲು ಕಾರಣವಾಗಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಅಲ್ಯುಮಿನ ಇದ್ದರೆ ಕೊರಂಡಮ್ ಖನಿಜ ರೂಪುಗೊಳ್ಳುತ್ತದೆ. ಈ ಗುಂಪಿನ ಶಿಲೆಗಳಲ್ಲಿ ಟೈಟಾನಿಫರಸ್ ಮ್ಯಾಗ್ನಟೈಟ್ ಇಲ್ಮನೈಟ್, ಕಬ್ಬಿಣ ಮತ್ತು ತಾಮ್ರದ ಸಲ್ಫೈಡ್ ಮತ್ತು ರೂಟೈಲ್ ಖನಿಜಗಳು ಉಪಖನಿಜಗಳಾಗಿ ಇರುತ್ತದೆ.										
(ಐ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ